ತಮಟೆಬಳ್ಳಿ
ಲೆಗ್ಯೂಮಿನೋಸೀ ಕುಟುಂಬದ ಫ್ಯಾಬೇಸೀ ಉಪ ಕುಟುಂಬಕ್ಕೆ ಸೇರಿದ ಒಂದು ಸಸ್ಯಜಾತಿ. ಕನವಾಲಿಯಯಾ ಎಂಬುದು ಇದರ ವ್ಶೆಜ್ಞಾನಿಕ ನಾಮ.  ಇದರಲ್ಲಿ 48 ಪ್ರಭೇದಗಳುಂಟು. ಇವುಗಳಲ್ಲಿ ಎರಡು ಪ್ರಭೇಧಗಳು ಮಾತ್ರ ರುಚಿಯಾದ ಕಾಯಿ ಬಿಡುವುದರಿಂದ ಜನಪ್ರಿಯವಾಗಿವೆ. ಕೆನವೆಲಿಯಾ ಎನ್ಸಿಫಾರ್ಮಿಸ್  ಮತ್ತು ಕೆನವೆಲಿಯಾ ಗ್ಲಾಡಿಯೇಟ ಎಂಬುವೇ ಈ ಎರಡು ಪ್ರಭೇದಗಳು.

ಕನವಾಲಿಯಾ ಎನ್ಸಿಫಾರ್ಮಿಸ್ ಪ್ರಭೇದದ ತೌರು ವೆಸ್ಟ್ ಇಂಡೀಸ್. ಇದನ್ನು ಭಾರತದಲ್ಲಿ ವಿಶೇಷವಾಗಿ ಬೆಳೆಸುವುದಿಲ್ಲ.  ಇದು 2'-5' ಎತ್ತರಕ್ಕೆ ಬೆಳೆಯುವ ವಾರ್ಷಿಕ ಪೊದೆಸಸ್ಯ.  ಕಾಯಿಗಳು ಕತ್ತಿಯಾಕಾರದಲ್ಲಿದ್ದು 8'-15” ಉದ್ದಕ್ಕಿದ್ದು, 1" ಅಗಲವಾಗಿವೆ. ಪ್ರತಿಕಾಯಿಯಲ್ಲೂ 10-12 ಬೀಜಗಳಿವೆ.  ತಮಟೆ ಬಳ್ಳಿ ಹೆಚ್ಚು ನೀರಿನ ಪೂರೈಕೆಯಿಲ್ಲದ ಬೇಗ ಬೆಳೆಯುತ್ತದೆ.  ಆದ್ದರಿಂದ ಇದನ್ನು ದನಕರುಗಳ ಮೇವಿಗಾಗಿಯೂ ಹಸಿರು ಗೊಬ್ಬರಕ್ಕಾಗಿಯೂ ಬೆಳೆಸುತ್ತಾರೆ. ಇದರ ಎಳೆಯಕಾಯಿ ಹಾಗೂ ಬೀಜಗಳನ್ನು ತರಕಾರಿಯಾಗಿ ಉಪಯೋಗಿಸುವುದುಂಟು. ಪ್ರತಿ ಎಕರೆಗೂ 16-20 ಟನ್ನು ಹಸಿರು ಮೇವು ಹಾಗೂ 1200  ಪೌಂಡ್‍ಗಳಷ್ಟು ಬೀಜ ದೊರೆಯುತ್ತದೆ. ಹಸಿರು ಗೊಬ್ಬರದ ರೂಪದಲ್ಲಿ ಇದು ಬಹಳ ಪ್ರಯೋಜನಕಾರಿಯಾದರೂ ಇದರ ಮೇವು ದನಗಳಿಗೆ ಎಷ್ಟರಮಟ್ಟಿಗೆ ರುಚಿಸುತ್ತದೆಂಬುದು ಸಂದೇಹಾಸ್ಪದ.  ಬೀಜಗಳಲ್ಲಿ ಒಂದು ಬಗೆಯ ವಿಷ ಪದಾರ್ಥ ಇದೆಯೆಂದು ಪ್ರಯೋಗಗಳಿಂದ ಸಿದ್ಧಪಟ್ಟಿದೆ.  ಇದರ ಸೇವನೆಯಿಂದ ಜಠರದಲ್ಲಿ ರಕ್ತಸ್ರಾವವಾಗುತ್ತದೆಂದು ಇಲಿಗಳ ಮೇಲೆ ಮಾಡಿದ ಪ್ರಯೋಗಗಳು ತೋರಿಸಿಕೊಟ್ಟಿವೆ.  ಆದರೂ ಗೋಧಿಯ ಹಿಟ್ಟಿನೊಡನೆ ಈ ಬೀಜದ ಹಿಟ್ಟನ್ನು 30%ರಷ್ಟು ಪ್ರಮಾಣದಲ್ಲಿ ಬೆರೆಸಿ ಉಪಯೋಗಿಸಬಹುದು. ಬೀಜಗಳನ್ನು ಹುರಿದು ಪುಡಿ ಮಾಡಿ ಕಾಫಿಯ ಪುಡಿಯೊಡನೆ ಕಲಬೆರಕೆ ಮಾಡುವುದುಂಟು. ಬೀಜಗಳಲ್ಲಿ ಗ್ಲಾಬ್ಯುಲಿನ್ ಜಾತಿಗೆ ಸೇರಿದ ಅನೇಕ ಪ್ರೋಟೀನುಗಳಿವೆ. ಇವುಗಳಲ್ಲಿ ಕನ್‍ವಾಲಿನ್, ಕಾನ್‍ಕನ್‍ವಾಲಿನ್ ಎ ಮತ್ತು ಕಾನ್‍ಕನ್‍ವಾಲಿನ್ ಬಿ ಎಂಬವು ಮುಖ್ಯವಾದುವು.

ತಮಟೆ ಬಳ್ಳಿಯ ಇನ್ನೊಂದು ಮುಖ್ಯ ಪ್ರಭೇದವಾದ ಕನವಾಲಿಯ ಗ್ಲಾಡಿಯೇಟ ಎಂಬುದು ಒಂದು ಬಹುವಾರ್ಷಿಕ ಬಳ್ಳಿ.  ಇದನ್ನು ಭಾರತದಲ್ಲಿ ಬಹಳವಾಗಿ ಬೆಳೆಸುತ್ತಾರೆ.  ಈ ಪ್ರಭೇದ ಕನವಾಲಿಯ ವೈರೋಸ ಎಂಬ ಪ್ರಭೇದದಿಂದ ಹುಟ್ಟಿರಬೇಕೆಂದು ಅನೇಕ ಸಸ್ಯಶಾಸ್ತ್ರಜ್ಞರ ಅಭಿಪ್ರಾಯ. ಇದರ ಎಲೆಗಳು ದನಗಳಿಗೆ ಒಳ್ಳೆಯ ಮೇವು. ಎಳೆಯಕಾಯಿ ಹಾಗೂ ಬೀಜಗಳನ್ನು ತರಕಾರಿಯಾಗಿ ಬಳಸಬಹುದು. ಹೂಗಳ ಬಣ್ಣ ತಿಳಿನೇರಳೆ.  ಕಾಯಿಗಳು 8"-12" ಉದ್ದಕ್ಕಿದ್ದು 1"-1.15" ಅಗಲವಾಗಿವೆ. ಈ ಸಸ್ಯದ ಕಾಯಿಗಳು ಎನ್ಸಿಫಾರ್ಮಿಸ್ ಪ್ರಭೇದದ ಕಾಯಿಗಳಿಗಿಂತ ವಕ್ರವಾಗಿವೆ. ಅಲ್ಲದೆ ಇವುಗಳ ಅಂಚು ದಪ್ಪ. ಹಸಿರುಕಾಯಿಗಳಲ್ಲಿ ಪ್ರೋಟೀನ್, ಕೊಬ್ಬು ಹಾಗೂ ಪಿಷ್ಠ ಪದಾರ್ಥಗಳಿದ್ದು ಸ್ವಲ್ಪಮಟ್ಟಿಗೆ ಖನಿಜಗಳು ಹಾಗೂ ಎ ವಿಟಮಿನ್ ಇವೆ.
(ಎಸ್.ಎಸ್.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ